ಜನವಾಣಿ
ಬೆಂಗಳೂರು ನಗರದಿಂದ ಪ್ರಕಟವಾಗುತ್ತಿದ್ದ ದಿನಪತ್ರಿಕೆ. 1934ರಲ್ಲಿ ಬಿ.ಎನ್.ಗುಪ್ತ ಅವರಿಂದ ಮದ್ರಾಸಿನಲ್ಲಿ ಪ್ರಾರಂಭಿಸಲ್ಪಟ್ಟಿತು. ಆರಂಭದಲ್ಲಿ ಈ ಪತ್ರಿಕೆಯ ಹಾದಿ ಸುಗಮವಾಗಿರಲಿಲ್ಲ ಅದು ವಹಿಸಿದ ಧೀಮಂತ ಪಾತ್ರದಿಂದ ಅನೇಕ ಎಡರುತೊಡರುಗಳನ್ನು ಎದುರಿಸಬೆಕಾಯಿತು. ಮದ್ರಾಸ್ ಸರ್ಕಾರದ ಆಗ್ರಹಕ್ಕೆ ಗುರಿಯಾಗಿ ಬಿ.ಎನ್.ಗುಪ್ತ ಅವರು ಬೆಂಗಳೂರು ನಗರಕ್ಕೆ ಬಂದು ಅಲ್ಲಿಂದ ಪತ್ರಿಕೆಯ ಪ್ರಕಟಣೆಯನ್ನು ಮುಂದುವರಿಸಿದರು. 1935ರ ವೇಳೆಗೆ ಜನವಾಣಿ ಉದ್ಯಮ ಒಂದು ಪರಿಮಿತಿ (ಲಿಮಿಟೆಡ್) ಸಂಸ್ಥೆಯಾಗಿ ಪರಿವರ್ತನೆಗೊಂಡಿತು. ಅದರ ಸಂಪಾದಕರಾಗಿದ್ದವರಲ್ಲಿ ಕೆ.ಸಿ.ರೆಡ್ಡಿ ಮತ್ತು ಬಿ.ಪುಟ್ಟಸ್ವಾಮಯ್ಯ ಪ್ರಮುಖರು. 1939ರಲ್ಲಿ ಪತ್ರಿಕೆಯ ಮಾಲೀಕತ್ವವನ್ನು ಅದರ ಸ್ಥಾಪಕ ಬಿ.ಎನ್. ಗುಪ್ತ ಅವರೇ ವಹಿಸಿಕೊಂಡು 1946ರ ವರೆಗು ಅದನ್ನು ದಕ್ಷತೆಯಿಂದ ನಡೆಸಿಕೊಂಡು ಬಂದು ಅದನ್ನು ಸ್ವಾತಂತ್ರ್ಯ ಹೋರಾಟದ ಪ್ರಬಲ ಅಸ್ತ್ರವನ್ನಾಗಿ ಮಾಡಿದರು.

	ಸ್ವಾತಂತ್ರ ಸಮರ ಬಿರುಸಿನಿಂದ ನಡೆಯುತ್ತಿದ್ದ ಆ ಸಮಯದಲ್ಲಿ ಜನವಾಣಿ ಮಹಾತ್ಮ ಗಾಂಧಿಯವರ ಬಳಿಗೆ ತನ್ನ ಪ್ರತಿನಿಧಿಗಳನ್ನು ಕಳುಹಿಸಿತು. ಮಹಾತ್ಮಾಜಿಯವರ ಚಟುವಟಿಕೆಗಳ ಬಗ್ಗೆ ಆ ಪ್ರತಿನಿಧಿ ಕಳುಹಿಸುತ್ತಿದ್ದ ವರದಿಗಳು ಕನ್ನಡ ಪತ್ರಿಕೋದ್ಯಮದಲ್ಲೇ ಉಲ್ಲೇಖಾರ್ಹವಾದವು. ಹರಿತವಾದ ಅಗ್ರಲೇಖನ, ನಿರ್ಭಯವಾದ ಟೀಕೆ ಟಿಪ್ಪಣಿಗಳಿಂದ ಕೂಡಿದ ಜನವಾಣಿ ಅತ್ಯಂತ ಜನಪ್ರಿಯವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡುತ್ತಿತ್ತು.

	1945ರ ಬಿ.ಎನ್. ಗುಪ್ತ ಅವರು ಜನವಾಣಿಯನ್ನೂ ಅವರೇ ನಡೆಸುತ್ತಿದ್ದ ವಾರಪತ್ರಿಕೆಯಾದ ಪ್ರಜಾಮತವನ್ನೂ ಬಿ.ಎಂ. ಶ್ರೀನಿವಾಸಯ್ಯನವರಿಗೆ ಮಾರಿದಾಗ ಜನವಾಣಿಯ ಚರಿತ್ರೆಯಲ್ಲಿ ಇನ್ನೊಂದು ಅಧ್ಯಾಯ ಆರಂಭವಾಯಿತು. ರೋಟರಿ ಮುದ್ರಣ ಯಂತ್ರ, ಟೆಲಿಪ್ರಿಂಟರ್ ಮುಂತಾದವುಗಳಿಂದ ಅದು ಸಜ್ಜಿತವಾಯಿತು. ಜಿ.ಎಸ್. ನರಸಿಂಹ ಸೋಮಯಾಜಿ ಅವರು ಈ ಪತ್ರಿಕೆಯ ಸಂಪಾದಕತ್ವ ವಹಿಸಿಕೊಂಡರು. ಕಳೆದ 27 ವರ್ಷಗಳಿಂದ ಅವರು ಅದರ ಸಂಪಾದಕರಾಗಿದ್ದಾರೆ.

	1959ರಲ್ಲಿ ಬಿ.ಎಂ.ಶ್ರಿಯನಿವಾಸಯ್ಯನವರು ವಿಧಿವಶರಾದ ಮೇಲೆ ಅವರ ಪುತ್ರ ಬಿ.ಎಸ್. ನಾರಾಯಣ್ ಅವರು ಜನವಾಣಿ, ಪ್ರಜಾಮತ ಪತ್ರಿಕೆಗಳ ಆಡಳಿತ ವಹಿಸಿಕೊಂಡರು. ಅವರ ಪ್ರಗತಿಪರ ಧೋರಣೆ, ಆಸಕ್ತ ಮತ್ತು ಪ್ರಯತ್ನಗಳ ಫಲವಾಗಿ ಜನವಾಣಿ ಬಹಳ ಪ್ರಗತಿ ಹೊಂದಿತು. ಅದರಲ್ಲಿ ಹಲವು ಸುಧಾರಣೆಗಳಾದವು.

	1964ರಲ್ಲಿ ಜನವಾಣಿ ಮತ್ತೊಂದು ಸಾಹಸದ ಕೆಲಸಕ್ಕೆ ಕೈ ಹಾಕಿತು. ಕನ್ನಡ ಪತ್ರಿಕೋದ್ಯಮದಲ್ಲೇ ಒಂದು ಮೈಲಿಗಲ್ಲು ಎಂದು ಪರಿಗಣಿಸಲ್ಪಟ್ಟು ನವೀನ ರೀತಿಯ ಹೊಸ ಶೈಲಿಯ, ಹೊಸ ವಿಚಾರಧಾರೆಯ ಸಾಪ್ತಾಹಿಕವೊಂದನ್ನು ಆರಂಭಿಸಿತು. ಜನವಾಣಿ ವಾರ್ತಾ ಸಾಪ್ತಾಹಿಕ ಎಂಬ ಹೆಸರಿನಿಂದ ಪ್ರಾರಂಭವಾದ ಈ ಸಾಪ್ತಾಹಿಕ ಅಮೆರಿಕದ ನ್ಯೂಸ್ ವೀಕ್‍ನೊಡನೆ ಸುದ್ದಿ ಸಂಪಾದನೆಯ ವಿಷಯದಲ್ಲಿ ಒಡಂಬಡಿಕೆ ಮಾಡಿಕೊಂಡು ಹಾಗೂ ಕನ್ನಡ ಜನತೆಗೆ ವಿಚಾರಪೂರ್ಣ ಹಾಗೂ ವೈಜ್ಞಾನಿಕ ಲೇಖನಗಳನ್ನು ಜಾಗತಿಕ, ರಾಜಕೀಯ ಹಾಗೂ ಆರ್ಥಿಕ ವ್ಯವಹಾರಗಳ ವಿಶ್ಲೇಷಣೆಯನ್ನು ಸರಳ ಸುಂದರ ಕನ್ನಡ ಶೈಲಿಯಲ್ಲಿ ಮನೋಜ್ಞವಾದ ರೀತಿಯಲ್ಲಿ ಒದಗಿಸುತ್ತಿತ್ತು. ಜಿ.ಎಸ್. ನರಸಿಂಹ ಸೋಮಯಾಜಿಯವರೇ ಈ ಸಾಪ್ತಾಹಿಕ ಸಂಪಾದಕರೂ ಆಗಿದ್ದರು. ಬಹುಬೇಗ ಜನಮನವನ್ನು ಆಕರ್ಷಿಸಿ ಅಧಿಕ ಪ್ರಸಾರ ಗಳಿಸಿಕೊಂಡ ಈ ಸಾಪ್ತಾಹಿಕ ಕೆಲವು ತೊಂದರೆಗಳಿಂದಾಗಿ ಸ್ವಲ್ಪ ಕಾಲದಲ್ಲೇ ನಿಂತುಹೋಯಿತು.

ಜನವಾಣಿ ಪತ್ರಿಕೆಯ ಪ್ರಸಾರ ಹಳೆಯ ಮೈಸೂರು ರಾಜ್ಯಕ್ಕೆ ಸೀಮಿತವಾಗಿದ್ದು, ಆರಂಭದಿಂದಲೂ ಸಂಜೆ ಪತ್ರಿಕೆಯಾಗಿಯೇ ಪ್ರಕಟವಾಗುತ್ತಿತ್ತು. 

ಹಲವಾರು ಏರಿಳಿತಗಳನ್ನು ಕಂಡ ಜನವಾಣಿ ಇನ್ನೊಂದು ಹಸ್ತಾಂತರದ ನಂತರ ಅವನತಿಯತ್ತ ಸಾಗಿತು.

	ಕರ್ನಾಟಕದ ಮುಖ್ಯಮಂತ್ರಿಗಳಾದ ದೇವರಾಜ ಅರಸರ ಅಳಿಯ ಎಂ.ಡಿ.ನಟರಾಜ್‍ರ ಮಾಲಿಕತ್ವದಲ್ಲಿ 9 ವರ್ಷಗಳ ಕಾಲ ನಡೆಯಿತು. ಎಂ.ಡಿ.ನಟರಾಜರ ಅವಸಾನದೊಂದಿಗೆ ಜನವಾಣಿಯು ಕೊನೆಯುಸಿರೆಳೆಯಿತು. (1987)
											(ಜಿ.ಎಸ್.ಎನ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ